Saturday, August 7, 2010

ನನ್ನ ಬರವಣಿಗೆ ಬೇರೆ ಏನು ಸಾಧಿಸದಿದ್ದರೂ ಪರವಾಗಿಲ್ಲ, ನನಗೊಬ್ಬರು ಅಕ್ಕನನ್ನು ಕೊಟ್ಟಿದೆ!

ನಾನು ಆದಿಲೋಕ ಬ್ಲಾಗನ್ನು ಶುರುಮಾಡಿ ವರ್ಷ ಆಯಿತು. ಈ ಒಂದು ವರ್ಷದಲ್ಲಿ ನಾನು ಸುಮಾರು 70 ಲೇಖನಗಳನ್ನು ಹಾಕಿದ್ದೆ. ಹಲವಾರು ಜನ ಲೇಖನಗಳನ್ನು ಓದಿ ತಮ್ಮ ಕಾಮೆಂಟುಗಳನ್ನು ನೀಡಿದ್ದರು ಕೂಡ. ಕೆಲವರು ನನ್ನ ಬರವಣಿಗೆಯ ಶೈಲಿಯನ್ನೂ ಮೆಚ್ಚಿ ಬರೆದಿದ್ದರು. ಆದರೆ ಅವರಲ್ಲೊಬ್ಬರಿದ್ದರು ವಿಶೇಷ. ನಾನು ಬರೆದದ್ದೆಲ್ಲವನ್ನೂ ಅವರು ಇಷ್ಟ ಪಡುತ್ತಿದ್ರು. ನನ್ನ ಒಟ್ಟಾರೆ ಬರವಣಿಗೆಯ ಶೈಲಿಯನ್ನು ಅಪಾರವಾಗಿ ಮೆಚ್ಚಿ ಬರೆಯುತ್ತಿದ್ದರು. ಒಮ್ಮೆ ಫೇಸ್ಬುಕ್ನಲ್ಲಿ ಮಾತಿಗೆ ಸಿಕ್ಕರು. ನಾನು ನಿಮ್ಮ ಫ್ಯಾನ್ ಎಂದು ಬೆಚ್ಚಿಬೀಳಿಸಿದರು, ತುಂಬಾನೆ ಮುಜುಗರಕ್ಕೀಡು ಮಾಡಿದರು. ಅವರಿಗೆ ನನ್ನ ಬರಿವಣಿಗೆಯಲ್ಲಿ ಅಷ್ಟು ಮೆಚ್ಚುವಂಥದ್ದು ಏನು ಕಂಡಿತೋ ನಾನು ಇವತ್ತಿಗೂ ಅರಿಯೆ! ನೆಟ್ ಲೋಕದಲ್ಲಿ ಹೀಗೆ ಆಗಾಗ ಮಾತಿಗೆ ಸಿಗುತ್ತಿದ್ದರು. ಒಬ್ಬರೊಬ್ಬರು ಪರಿಚಯ ಆದೆವು. ಅವರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದಾರೆ. ಅವರ ಹೆಸರು ಬಿ.ಕೆ.ಸುಮತಿ. ಅವರನ್ನು ಒಮ್ಮೆ ಭೇಟಿ ಮಾಡುವ ಇರಾದೆ ನನಗೂ ಇತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ.

ಒಂದು ದಿನ ಭೇಟಿಯಾಗುವ ಪ್ರಸ್ತಾವನೆಯನ್ನು ಅವರೇ ಇಟ್ಟರು. ಸರಿ ನಾನೂ ಅಂಥದೊಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಒಪ್ಪಿದೆ. ಅವರ ಆಫೀಸಿನ ಹತ್ತಿರವೇ ಭೇಟಿಯಾಗುವುದೆಂದು ತೀರ್ಮಾನವಾಗಿತ್ತು. ನನಗೋ ಅದೇನೋ ಹೇಳಲರಿಯದ ಕಾತರ, ಕುತೂಹಲ. ಅಂತೂ ಆಕಾಶವಾಣಿ ಆಫೀಸಿಗೆ ಹೋದೆ. ಆಚೆನೇ ಕಾಯುತ್ತಿದ್ದರು ಸುಮತಿಯವರು. ಆದರೆ ಅಲ್ಲಿ ಮೂರು ನಾಲ್ಕು ಜನ ಇದ್ದರು, ಅವರಲ್ಲಿ ಸುಮತಿಯವರು ಯಾರು? ಕಡೆಗೆ ನನ್ನ ಅವಸ್ಥೆ ನೊಡಿ ಅವರೇ ಬಂದು ಪರಿಚಯಿಸಿಕೊಂಡರು. ಸರಿ ಅಂತ ಆಕಾಶವಾಣಿ ಆಫೀಸಿನ ಪಕ್ಕದಲ್ಲೇ ಇರುವ ಇಂಡಿಯನ್ ಕಾಫಿ ಹೌಸಿಗೆ ಹೋದೆವು. ನಮ್ಮಿಬ್ಬರ ಭೇಟಿ ಅಕ್ಷರಶಃ ಬೈ 2 ಕಾಪಿ ಜೊತೆಗೇ ಆಗಿದ್ದು! ಅರ್ಧ ಘಂಟೆ ಮಾತಾಡಿದ್ದೇ ಮಾತಾಡಿದ್ದು. usually ನಾನು ತುಂಬಾನೇ reserved ಆಗಿಯೇ ಇರುತ್ತೇನೆ. especially ನನ್ನ ವಯಕ್ತಿಕ ವಿಷಯಗಳ ಬಗ್ಗೆ ತುಟಿ ಎರಡು ಮಾಡುವುದೇ ಇಲ್ಲ. ಕೆಲವರ ಹತ್ತಿರ ಮಾತ್ರ ನಾನು open up ಆಗುವುದು. ಅದೇಕೋ ಗೊತ್ತಿಲ್ಲ ಮೊದಲ ಭೇಟಿಯಲ್ಲಿಯೇ ಸುಮತಿಯವರೊಡನೆ ನಾನು ತೀರಾ comfortable ಆಗಿದ್ದೆ. ನನ್ನ ಅಭಿರುಚಿಗಳು, ಮಾಡುತ್ತಿರುವ ಮಾಡಲು ಯೊಚಿಸಿರುವ ಸಣ್ಣ ಪುಟ್ಟ ಪ್ರಾಜೆಕ್ಟುಗಳು ಎಲ್ಲದರ ಬಗ್ಗೆ ಮನಬಿಚ್ಚಿ ಮಾತಾಡಿದೆ, ಅವರಿಗೆ ಮಾತಾಡಲು ಅವಕಾಶವನ್ನೇ ಕೊಡದೆ ವಟಗುಟ್ಟಿದೆ. ಈ ಮಾತಿನ ಮಧ್ಯೆಯೇ ಗೊತ್ತಾಯಿತು. ಅವರದೂ ಕೋಲಾರ ಜಿಲ್ಲೆ, ಮುಳಬಾಗಿಲ ಬಳಿ ಯಾವುದೋ ಹಳ್ಳಿ. ಪೆರಮಾಚನಪಲ್ಲಿಯಲ್ಲೂ ಅವರಿಗೆ ಬಂಧುಗಳಿದ್ದಾರೆ! ಇಂಚು ಮಿಂಚು ಅವರು ನಮ್ಮ ಊರಿನವರೇ! ಒಂದು ಅರ್ಧ ಘಂಟೆಯ ಭೇಟಿ ಅಷ್ಟೆ. ಆದರೆ ಗೆಳೆತನ ಆತ್ಮೀಯತೆಗೆ ಹೊರಳಿತ್ತು. ಮೇಡಂನೋರು ಅಕ್ಕ ಆದರು! ಬಹುವಚನ ಮಾಯವಾಗಿ ನನ್ನನ್ನು ಏಕವಚನದಲ್ಲಿ ಸಂಭೊಧಿಸಲು ಶುರುಮಾಡಿದರು, ಸಧ್ಯ. ಅವರಿಗೆ ಹತ್ತಿರತ್ತಿರ ನಮ್ಮಮನ ವಯಸ್ಸು, ಅವರು ನನ್ನನ್ನು ಬಹುವಚನದಲ್ಲಿ ಸಂಭೋಧಿಸುತ್ತಿದ್ದರೆ ಕೇಳಲು ಕಷ್ಟವಾಗುತ್ತಿತ್ತು.

ಕೆಲವು ತಿಂಗಳುಗಳಿಂದ ಮಾತ್ರ ನನಗೆ ಸುಮತಿಯವರು ಗೊತ್ತು. ನಾನು ಕಂಡಂತೆ ಅವರಲ್ಲಿ ಅವರ ವೃತ್ತಿಯ ಬಗೆಗೆ ಮತ್ತು ಆಕಾಶವಾಣಿ ಸಂಸ್ಥೆಯ ಬಗೆಗೆ ಒಂದು ಉತ್ಕಟವಾದ ಪ್ರೀತಿಯಿದೆ. ಕೆಲಸದಲ್ಲಿ ಪ್ರಾಮಾಣಿಕತೆಯಿದೆ. ತುಂಬಾ ಒಳ್ಳೆ ಅಭಿರುಚಿಯಿದೆ. ಸದಾ ಕ್ರಿಯಾಶೀಲೆ.  ಎಲ್ಲದಕ್ಕಿಂತ ಆಕೆಯದು ತಾಯಿಯ ಅಕಾರಣ ಪ್ರೀತಿ, ಮಮತೆ. ನಮ್ಮ ಮನೆಯಲ್ಲಿ ಎಲ್ಲರಿಗಿಂತಲೂ ನಾನೇ ದೊಡ್ಡವನು, ಎಲ್ಲರೂ ನನಗಿಂತ ಕಿರಿಯರೇ. ಹಾಗಾಗಿ ನನಗೆ ಅಕ್ಕನ ಮಮತೆ ಅಷ್ಟಾಗಿ ಗೊತ್ತಿಲ್ಲ, ಕಿವಿ ಹಿಂಡುವವರೂ ಇಲ್ಲ. ನನಗೆ ಸದಾ ಕಿವಿ ಹಿಂಡುವವರೊಬ್ಬರಿರಬೇಕು, ಇಲ್ಲದಿದ್ದರೆ ನಾನು ಯಾರ ಕೈಗೂ ಸಿಗುವವನಲ್ಲ, ಗೂಳಿಯೇ! ಸುಮತಿಯವರಲ್ಲಿ ನಾನು ಎರಡನ್ನೂ ಕಂಡುಕೊಂಡೆ. ಈಗ ಅಕ್ಕ ಕೂಡ ಆಕೆಯ ಸೃಜನಶೀಲತೆಯ ಅಭಿವ್ಯಕ್ತಿಗೆ ಒಂದು ಬ್ಲಾಗು ಶುರು ಮಾಡಿದ್ದಾರೆ. ಮತಿ ಮಾತು ಅಂತ.

ಹಾಗೇ ಇನ್ನೊಂದು ಭೇಟಿಯ ಬಗ್ಗೆಯೂ ಇಲ್ಲಿ ಹೇಳಿಬಿಡುತ್ತೇನೆ ಕೇಳಿ. ಅದೂ ಕೂಡ ಆಕಸ್ಮಿಕವೇ. ಒಮ್ಮೆ ಫೇಸ್ಬುಕ್ ಅನ್ನು ಜಾಲಾಡುತ್ತಿದ್ದಾಗ ಒಂದು ಚಿಟ್ಟೆಗಳ ಛಾಯಾಚಿತ್ರಗಳುಳ್ಳ ಆಲ್ಬಮ್ ಕಣ್ಣಿಗೆ ಬಿತ್ತು. ನೂರಾರು ಚಿತ್ರಗಳು ನೂರಾರು ಬಣ್ಣ ಬಣ್ಣದ ಚಿಟ್ಟೆಗಳು. ತುಂಬಾ ಆಹ್ಲಾದಕರವೆನಿಸಿತ್ತು. more than photography i was fascinated by this little girl's passion for butterflies. ಒಂದು ಮೆಚ್ಚುಗೆಯ ಮಾತು ಬರೆದು ಆಕೆಯ wall ಗೆ ಮೆತ್ತಿಸಿ ಮರೆತುಬಿಟ್ಟೆ. ಆಕೆಯ ಹೆಸರು ಅಭಿಜ್ಞಾ ದೇಸಾಯಿ. ಅವತ್ತೇ ರಾತ್ರಿ ಆಕೆ ಫೇಸ್ಬುಕ್ನಲ್ಲಿ ಮಾತಿಗೆ ಸಿಕ್ಕು ಹೇಳಿದಳು - ನಾನು ನಿಮ್ಮ ಅಕ್ಕನ ಮಗಳು!! yes ಆಕೆ ಸುಮತಿ ಅಕ್ಕನ ಮಗಳು. what a co-incidence! ಈ ವರ್ಷ ಎಸ್ಎಸ್ಎಲ್ಸಿ ಮುಗಿಸಿ ಪಿಯುಸಿ ಸೇರಿದ್ದಾಳೆ. ಆಕೆಗೆ wildlife photography ಬಗ್ಗೆ ಒಂದು ತೀರದ ಪ್ಯಾಷನ್. ಆಕೆಯೊಡೆನೆಯೂ ಪರಿಚಯ ಬೆಳೆಯಿತು. a good little friend . ಆಕೆಯದೂ ಒಂದು ಬ್ಲಾಗಿದೆ winged jewels. ನಿಜವಾಗಲೂ ನೋಡಲು ಇಷ್ಟವಾಗುವಂಥ ಬ್ಲಾಗು. ಎಲ್ಲವೂ ಚಿಟ್ಟೆಮಯ.

ಯಾವುದೋ ಓಂದು ಸಣ್ಣ ಕೆಲಸಕ್ಕೆ ಬೇಡ ಅಂದರೂ ಕೇಳದೆ, ಹಠ ಮಾಡಿ ಅಕ್ಕ ನನ್ನನ್ನು ಮನೆಗೆ ಕರೆಸಿಕೊಂಡರು. ಅಲ್ಲಿ ಅಭಿಜ್ಞಳನ್ನೂ ಭೇಟಿ ಮಾಡಿದೆ. ಅವತ್ತು ನಮಗೆಲ್ಲಾ ಘಮ್ಮನ್ನೆವ ನನಗಿಷ್ಟದ ಸ್ಟ್ರಾಂಗ್ ಕಾಫಿಯನ್ನು ಮಾಡಿಕೊಟ್ಟವಳು ಆಕೆಯೇ. ಅಕ್ಷರಶಃ ಅದು ಅಕ್ಕನ ಮನೆಗೆ ತಮ್ಮ ಹೋದಂತೆಯೇ ಇತ್ತು. ಅಕ್ಕ ಮಾತ್ರವಲ್ಲದೆ ಅವರ ಮನೆಯವರೆಲ್ಲರೂ ನನ್ನನ್ನು ಅದೇ ಮಮತೆಯಿಂದ ಕಂಡದ್ದು ತುಂಬಾ ಖುಷಿ ಕೊಡ್ತು. ಅವತ್ತು ಸುಮಾರು 2 ಘಂಟೆ ಮಾತಾಡಿದಿವಿ ಅಂತ ಕಾಣುತ್ತೆ. ಅಸಲು ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. by 2 ಕಾಫಿಯಿಂದ ಪ್ರಾರಂಭವಾದ ನಮ್ಮಿಬ್ಬರ ಬಾಂಧವ್ಯ ಹೀಗೇ ಮುಂದುವರೆದಿದೆ, ಮುಂದುವರೆಯುತ್ತದೆ.

ನನ್ನ ಬರವಣಿಗೆ ಬೇರೆ ಏನು ಸಾಧಿಸದಿದ್ದರೂ ಬೇಜಾರಿಲ್ಲ, ನನಗೊಬ್ಬ ಅಕ್ಕನನ್ನು ಕೊಟ್ಟಿದೆ! I am proud of that.
(ಇದನ್ನ ಬರೀತೀನಿ ಅಂದರೆ ಅಕ್ಕ ಬೇಡ ಅಂತ ಎಂದಿನಂತೆ ರಾಗ ಎಳದರು. ಆದರೂ ಬರೆದಿದೀನಿ!! sorry ಅಕ್ಕ.)

Wednesday, August 4, 2010

by 2 ಕಾಫಿ


ನನ್ನ ಸ್ವಭಾವವೇ ವಿಚಿತ್ರ. ನಾನು ಮೂಲತಃ ಅಂತರ್ಮುಖಿ. ಆತ್ಮೀಯರ ಬಳಿ ಮಾತ್ರವೇ ನಾನು open up ಆಗುವುದು. ಆದರೆ ಮಾತು ಜಾಸ್ತಿ. ರಸ್ತೆ ಬದಿಯ ಮೈಲಿಗಲ್ಲನಾದರೂ ಸರಿ ಮಾತನಾಡಿಸಿಯೇ ಸಿದ್ಧ. ಮೇಲಾಗಿ ನಾನೊಬ್ಬ ಪತ್ರಕರ್ತ. ಈ ಜೀವನದಲ್ಲಿ ನಿತ್ಯ ಅನೇಕರನ್ನು ಭೇಟಿ ಮಾಡುತ್ತಿರುತ್ತೇವೆ. ಕೆಲವರ ಭೇಟಿ ಮನಸ್ಸಿಗೆ ಮುದ ನೀಡಿದರೆ, ಮತ್ತೆ ಕೆಲವರ ಭೇಟಿ ಅನಿವಾರ್ಯ ಕರ್ಮ ನನಗೆ...ಹೀಗೆ ಎಲ್ಲೋ ಸಿಕ್ಕು ಜೊತೆಯಾಗಿ ಒಂದು ಕಾಫಿ ಕುಡಿದವರ, ಆ ಭೇಟಿಯ ನೆನಪಿಗಾಗಿ ಈ ಬ್ಲಾಗು...